ಶೋಭಾನವೆನ್ನಿರೆ ಸುರರೊಳು ಸುಭಗನಿಗೆ


ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥


ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ॥ ಶೋಭಾನೆ ॥ ॥ 1 ॥


ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾದೇವಿ
ಪಾಲಿಸಲಿ ನಮ್ಮ ವಧೂವರರ ॥ ಶೋಭಾನೆ ॥ ॥ 2 ॥


ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ
ಜನ್ಮವೆಂಬುದು ಅವತಾರ ॥ ಶೋಭಾನೆ ॥ ॥ 3 ॥


ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ ಪೀ-
ತಾಂಬರವುಟ್ಟು ಮೆರೆದಳು ॥ 4 ॥


ಒಂದು ಕರದಿಂದ ಅಭಯವನೀವಳೆ ಮ-
ತ್ತೊಂದು ಕೈಯಿಂದ ವರಗಳ
ಕುಂದಿಲ್ಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ॥ 5 ॥


ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲುಕೆನಲು
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮೀ
ಸಲಹಲಿ ನಮ್ಮ ವಧೂವರರ ॥ 6 ॥


ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಮನ್ನೆಯ ವಧೂವರರ ಸಲಹಲಿ ॥ 7 ॥


ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ-
ದಂಬೆ ವಧೂವರರ ಸಲಹಲಿ ॥ 8 ॥


ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷ್ಮಿ
ಕಸ್ತೂರಿತಿಲಕ ಧರಿಸಿದಳೆ
ಕಸ್ತೂರಿತಿಲಕ ಧರಿಸಿದಳಾ ದೇವಿ ಸ-
ರ್ವತ್ರ ವಧೂವರರ ಸಲಹಲಿ ॥ ॥ 9 ॥


ಅಂಬುಜನಯನಗಳ ಬಿಂಬಾಧರದ ಶಶಿ
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಮಹಲಕ್ಷುಮಿ
ಉಂಬುದಕೀಯಲಿ ವಧೂವರರ್ಗೆ ॥ 10 ॥


ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದಳೆ
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ
ಭಕ್ತಿಯ ಜನರ ಸಲಹಲಿ ॥ 11 ॥


ಕುಂದಮಂದಾರ ಜಾಜಿಕುಸುಮಗಳ ವೃಂದವ
ಚೆಂದದ ತುರುಬಿಲಿ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆ-
ಯಿಂದ ವಧೂವರರ ಸಲಹಲಿ ॥ 12 ॥


ಎಂದೆಂದೂ ಬಾಡದ ಅರವಿಂದಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ॥ 13 ॥


ದೇವಾಂಗಪಟ್ಟೆಯ ಮೇಲು ಹೊದ್ದಿಕೆಯ
ಭಾವೆ ಮಹಲಕ್ಷುಮಿ ಧರಿಸಿದಳೆ
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಸೇವಕಜನರ ಸಲಹಲಿ ॥ 14 ॥


ಈ ಲಕ್ಷುಮಿದೇವಿಯ ಕಾಲುಂಗುರ ಘಲುಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ॥ 15 ॥


ತನ್ನ ಮಕ್ಕಳ ಕುಂದ ತಾನೆ ಪೇಳುವುದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನಂತ ದೋಷಗಳನೆಣಿಸಿದಳು ॥ 16 ॥


ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ? ॥ 17 ॥


ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿ ಇಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ॥ 18 ॥


ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ ॥
ಕಾಮಾಂಧನಾಗಿ ಮುನಿಯ ಕಾಮಿನಿಗೈದಿದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ॥ 19 ॥


ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅ-
ದೃಶ್ಯಾಂಘ್ರಿಯೊಬ್ಬ ಒಕ್ಕಣ್ಣನೊಬ್ಬ ॥ 20 ॥


ಮಾವನ ಕೊಂದೊಬ್ಬ ಮರುಳಾಗಿಹನು ಗಡ
ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ॥ 21 ॥


ಧರ್ಮ ಉಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ॥ 22 ॥


ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳತಳಕ್ಕೆ ಇಳಿದ ಗಡ ! ॥ 23 ॥


ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದ ತೊಲಗಿಸುವ
ಒಲ್ಲೆ ನಾನಿವರ ನಿತ್ಯ ಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ॥ 24 ॥


ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಗಾಗಿ ಭವದಲ್ಲಿ
ಸುಖದುಃಖವುಂಬ ಬೊಮ್ಮಾದಿ ಜೀವರು
ದುಃಖಕೆ ದೂರಳೆನಿಪ ಎನಗೆಣೆಯೆ ॥ 25 ॥


ಒಬ್ಬನವನ ಮಗ ಮತ್ತೊಬ್ಬನವನ ಮೊಮ್ಮ
ಒಬ್ಬನವನಿಗೆ ಶಯನಾಹ
ಒಬ್ಬನವನ ಪೊರುವ ಮತ್ತಿಬ್ಬರವನಿಗಂಜಿ
ಅಬ್ಬರದಲಾವಾಗ ಸುಳಿವರು ॥ 26 ॥


ಒಬ್ಬನಾವನ ನಾಮಕಂಜಿ ಬೆಚ್ಚುವ ಗಡ
ಸರ್ಬರಿಗಾವ ಅಮೃತವ
ಸರ್ಬರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ॥ 27 ॥


ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನ ಬಂದಂತೆ ನುಡಿಯದಿರು ॥ 28 ॥


ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ॥ 29 ॥


ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿರ್ದ ಹರಿಗೆ ದುರಿತವ
ಭಾವಜ್ಞರೆಂಬರೆ ಆಲದೆಲೆಯ ಮೇಲೆ
ಶಿವನ ಲಿಂಗವ ನಿಲಿಸುವರೆ ॥ 30 ॥


ಹಸಿ-ತೃಷೆ-ಜರೆ-ಮರಣ ರೋಗರುಜಿನಗಳೆಂಬ
ಅಸುರಪಿಶಾಚಿಗಳ ಭಯವೆಂಬ
ವ್ಯಸನ ಬರಬಾರದು ಎಂಬ ನಾರಾಯಣಗೆ
ಪಶು ಮೊದಲಾಗಿ ನೆನೆಯದು ॥ 31 ॥


ತಾ ದುಃಖಿಯಾದರೆ ಸುರರ ರತಿಯ ಕಳೆದು
ಮೋದವೀವುದಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಬಾಧಿಪ ಕೆಸರ ಬಿಡಿಸುವನೆ? ॥ 32 ॥


ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ ?
ಜನ್ಮ ಲಯವಿಲ್ಲದವನಿಗೆ ?
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ ?
ಅಮ್ಮ ಇವಗೆ ಹಸಿತೃಷೆಯುಂಟೆ ? ॥ 33 ॥


ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ
ಯೋಗಿಗಳುಂಟೆ? ಧನಧಾನ್ಯ
ಆಗ ದೊರಕೊಂಬುದೆ? ಪಾಕ ಮಾಡುವ ವಹ್ನಿ ಮ-
ತ್ತಾಗಲೆಲ್ಲಿಹುದು? ವಿಚಾರಿಸಿರೊ ॥ 34 ॥


ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೆ? ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ?
ಈ ಗುಣನಿಧಿಗೆ ಎಣೆಯುಂಟೆ? ॥ 35 ॥


ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೋ
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ? ॥ 36 ॥


ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೋ
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ-
ಲುಕನೆಂಬೋದು ಸಲಹಲಿಕೆ ॥ 37 ॥


ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗರುಜಿನವು
ಬಲ್ಲ ವೈದ್ಯರ ಕೇಳಿ ಅಜೀರ್ತಿ ಮೂಲವಲ್ಲ-
ದಿಲ್ಲ ಸಮಸ್ತ ರುಜಿನವು ॥ 38 ॥


ಇಂಥಾ ಮೂರುತಿಯ ಒಳಗೊಂಬ ನರಕ ಬಹು-
ಭ್ರಾಂತ ನೀನೆಲ್ಲಿಂದ ತೋರಿಸುವೆಲೋ ?
ಸಂತೆಯ ಮರುಳ ಹೋಗೆಲೋ ನಿನ್ನ ಮಾತ
ಸಂತರು ಕೇಳಿ ಸೊಗಸರು ॥ 39 ॥


ಶ್ರೀನಾರಾಯಣರ ಜನನಿಜನಕರ
ನಾನೆಂಬ ವಾದಿ ನುಡಿಯೆಲೊ
ಜಾಣರದರಿಂದರಿಯ ಮೂಲರೂಪವ ತೋರಿ
ಶ್ರೀನಾರಸಿಂಹನ ಅವತಾರ ॥ 40 ॥


ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ಎಂಬ ಶ್ರೀಹರಿಯ ಪಿತನಾರು ?
ಎಂಬ ಶ್ರೀಹರಿಯ ಪಿತನಾರು ಅದರಿಂದ ಸ್ವ-
ಯಂಭುಗಳೆಲ್ಲ ಅವತಾರ ॥ 41 ॥


ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ
ಆವ ಪರಿಯಲ್ಲಿ ನುಡಿವೆಯೊ? ॥ 42 ॥


ಆವಳಿಸುವಾಗ ಯಶೋದಾದೇವಿಗೆ
ದೇವ ತನ್ನೊಳಗೆ ಹುದುಗಿದ್ದ
ಭುವನವೆಲ್ಲವ ತೋರಿದ್ದುದಿಲ್ಲವೆ ?
ಆ ವಿಷ್ಣು ಗರ್ಭದೊಳಗಡಗುವನೆ ? ॥ 43 ॥


ಆನೆಯ ಮಾನದಲಿ ಅಡಗಿಸಿದವರುಂಟೆ ?
ಅನೇಕ ಕೋಟಿ ಅಜಾಂಡವ
ಅಣುರೋಮಕೂಪದಲಿ ಆಳ್ದ ಶ್ರೀಹರಿಯ
ಜನನಿಜಠರವು ಒಳಗೊಂಬುದೆ ॥ 44 ॥


ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ ?
ಸುದತೇರಿಗಿವನೆಂತು ಸಿಲುಕುವನೆ? ॥ 45 ॥


ಅದರಿಂದ ಕೃಷ್ಣನಿಗೆ ಪರನಾರೀಸಂಗವ ಕೋ-
ವಿದರಾದ ಬುಧರು ನುಡಿವರೆ?
ಸದರವೆ ಈ ಮಾತು ? ಸರ್ವವೇದಂಗಳು
ಮುದದಿಂದ ತಾವು ಸ್ತುತಿಸುವವು ॥ 46 ॥


ಎಂದ ಭಾಗವತದ ಚೆಂದದ ಮಾತನು
ಮಂದ ಮಾನವ ಮನಸಿಗೆ
ತಂದುಕೊ ಜಗಕೆ ಕೈವಲ್ಯವೀವ ಮು-
ಕುಂದಗೆ ಕುಂದು ಕೊರತೆ ಸಲ್ಲ ॥ 47 ॥


ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವುದೆ ?
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರೆತಿದ್ದ ॥ 48 ॥


ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ?
ಅರ್ತಿಯ ಸೃಷ್ಟಿ ಹರಿಗಿದು ॥ 49 ॥


ರೋಮ ರೋಮ ಕೂಪ ಕೋಟಿವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ ಮ-
ಹಿಮ್ಮೆ ಬಲ್ಲವರಿಗೆ ಸಲಹಲಿಕೆ ॥ 50 ॥


ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನ್ನತೆ ಬಲ್ಲವರಿಗೆ ಸಲಹಲಿಕೆ ॥ 51 ॥


ನಾರದ-ಸನಕಾದಿ ಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾದರೆ
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ?
ಆರಾಧಿಸುತ್ತ ಭಜಿಸುವರೆ? ॥ 52 ॥


ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದವರಿವನ ಭಜಿಸುವರೆ? ॥ 53 ॥


ಆವನಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ ?
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ? ॥ 54 ॥


ಕಿಲ್ಬಿಷವಿದ್ದರೆ ಅಗ್ರಪೂಜೆಯನು
ಸರ್ಬರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆ ?
ಕೊಬ್ಬದಿರೆಲೊ ಪರವಾದಿ ॥ 55 ॥


ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲಿ
ನೋವನೀವನೆ ನಿಮ್ಮ ಯಮದೇವನು
ಗೋವ ನೀ ಹರಿಯ ಗುಣವರಿಯ ! ॥ 56 ॥


ನರಕವಾಳುವ ಯಮಧರ್ಮರಾಯ ತನ್ನ
ನರಜನ್ಮದೊಳಗೆ ಪೊರಳಿಸಿ
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು ?
ಕುರು ನಿನ್ನ ಕುಹಕ ಕೊಳದಲ್ಲಿ ॥ 57 ॥


ಬೊಮ್ಮನ ನೂರು ವರುಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿರ್ದ
ನಮ್ಮ ನಾರಾಯಣಗೆ ಹಸಿ-ತೃಷೆ-ಜರೆ-ಮರಣ ದು-
ಷ್ಕರ್ಮ ದುಃಖಂಗಳು ತೊಡಸುವರೆ ? ॥ 58 ॥


ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯಕಾಯದ ಸಿರಿಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳುಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ॥ 59 ॥


ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದಿವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ॥ 60 ॥


ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ
ರಣರಂಗದಲ್ಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ॥ 61 ॥


ತಾಯ ಪೊಟ್ಟೆಯಿಂದ ಮೂಲರೂಪವ ತೋರಿ
ಆಯುಧಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ ?
ಬಾಯಿಗೆ ಬಂದಂತೆ ಬೊಗಳದಿರು ॥ 62 ॥


ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಮುಕುಟವು
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ-
ವಿಠ್ಠಲ ಪುಟ್ಟಿದನೆನಬಹುದೆ ? ॥ 63 ॥


ಋಷಭಹಂಸಮೇಷಮಹಿಷಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಹಸಕ್ಕೆ ಮಣಿದರು
ಕುಸುಮನಾಭನಿಗೆ ಸರಿಯುಂಟೆ ? ॥ 64 ॥


ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹುದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ॥ 65 ॥


ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷಮನದಿ ನೆನೆವುತ್ತ
ಸಂತೋಷಮನದಿ ನೆನೆವುತ್ತ ತನ್ನ ಶ್ರೀ-
ಕಾಂತನಿದ್ದೆಡೆಗೆ ನಡೆದಳು ॥ 66 ॥


ಕಂದರ್ಪಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ -
ಯೆಂದವನ ಬಳಿಗೆ ನಡೆದಳು ॥ 67 ॥


ಇತ್ತರದ ಸುರರ ಸುತ್ತ ನೋಡುತ್ತ ಲಕ್ಷ್ಮಿ
ಚಿತ್ತವ ಕೊಡದೆ ನಸುನಗುತ
ಚಿತ್ತವ ಕೊಡದೆ ನಸುನಗುತ ಬಂದು ಪುರು-
ಷೋತ್ತಮನ ಕಂಡು ನಮಿಸಿದಳು ॥ 68 ॥


ನಾನಾಕುಸುಮಗಳಿಂದ ಮಾಡಿದ ಮಾಲೆಯ
ಶ್ರೀನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ ಕೊರ-
ಳಿನ ಮೇಲಿಟ್ಟು ನಮಿಸಿದಳು ॥ 69 ॥


ಉಟ್ಟ ಪೊಂಬಟ್ಟೆಯ ತೊಟ್ಟಾಭರಣಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನನೆಂಬ ಕಡೆಯ ಪೆಂಡೆಗಳ
ವಟ್ಟಿದ್ದ ಹರಿಗೆ ವಧುವಾದಳು ॥ 70 ॥


ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದವು ॥ 71 ॥


ಅರ್ಘ್ಯ ಪಾದ್ಯಾಚಮನ ಮೊದಲಾದ ಷೋಡಶ-
ನರ್ಘ್ಯ ಪೂಜೆಯಿತ್ತನಳಿಯಂಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ॥ 72 ॥


ವೇದೋಕ್ತಮಂತ್ರ ಪೇಳಿ ವಸಿಷ್ಠ-ನಾರದ ಮೊದ-
ಲಾದ ಮುನೀಂದ್ರರು ಮುದದಿಂದ
ವಧೂವರರ ಮೇಲೆ ಶೋಭನದಕ್ಷತೆಯನು
ಮೋದವೀವುತ್ತ ತಳಿದರು ॥ 73 ॥


ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ತುತಿಸುತ್ತ
ತುಂಬುರುನಾರದರು ತುತಿಸುತ್ತ ಪಾಡಿದರು ಪೀ-
ತಾಂಬರಧರನ ಮಹಿಮೆಯ ॥ 74 ॥


ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೇಲೆ ಕರೆದರು ॥ 75 ॥


ಮುತ್ತುರತ್ನಗಳಿಂದ ತೆತ್ತಿಸಿದ ಹಸೆಯ ನವ-
ರತ್ನಮಂಟಪದಿ ಪಸರಿಸಿ ನವ-
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ॥ 76 ॥


ಶೇಷಶಯನನೆ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-
ಲಾಸದಿಂದೆಮ್ಮ ಹಸೆಗೆ ಬಾ ॥ 77 ॥


ಕಂಜಲೋಚನನೆ ಬಾ ಮಂಜುಳಮೂರ್ತಿಯೆ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-
ರಂಜನ ನಮ್ಮ ಹಸೆಗೆ ಬಾ ॥ 78 ॥


ಆದಿಕಾಲದಲ್ಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ॥ 79 ॥


ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅ-
ನಾದಿಮೂರುತಿಯೆ ಹಸೆಗೆ ಬಾ ॥ 80 ॥


ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ-
ತಿರ್ಮಯವಾದ ಪದ್ಮದಲ್ಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ॥ 81 ॥


ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯರೊಡನೆ ಹಸೆಗೆ ಬಾ ॥ 82 ॥


ಬೊಮ್ಮನ ಮನೆಯಲ್ಲಿ ರನ್ನಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲಪೂಜೆಯ ಕೈಗೊಂಡ ಶ್ರೀಕೃಷ್ಣ ಪರ-
ಬೊಮ್ಮಮೂರುತಿಯೆ ಹಸೆಗೆ ಬಾ ॥ 83 ॥


ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗ-
ಲಿಕ್ಕಿ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ॥ 84 ॥


ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಗಳನು ಬಡಿಸಲು ಕೈಗೊಂಬ
ಮುದ್ದು ನರಸಿಂಹ ಹಸೆಗೆ ಬಾ ॥ 85 ॥


ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ॥ 86 ॥


ನಿಮ್ಮಣ್ಣನ ಮನೆಯ ಸುಧರ್ಮಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-
ರಮ್ಮ ಮೂರುತಿಯೆ ಹಸೆಗೆ ಬಾ ॥ 87 ॥


ಇಂದ್ರನ ಮನೆಗ್ಹೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ॥ 88 ॥


ನಿಮ್ಮ ನೆನೆವ ಮುನಿಹೃದಯದಲಿ ನೆಲಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಬ ನಿ-
ಸ್ಸೀಮಮಹಿಮ ಹಸೆಗೆ ಬಾ ॥ 89 ॥


ಮುತ್ತಿನ ಸತ್ತಿಗೆ ನವರತ್ನದ ಚಾಮರ
ಸುತ್ತ ನಲಿವ ಸುರಸ್ತ್ರೀಯರ
ನೃತ್ಯವ ನೋಡುವ ಚಿತ್ರವಾದ್ಯಂಗಳ ಸಂ-
ಪತ್ತಿನ ಹರಿಯೆ ಹಸೆಗೆ ಬಾ ॥ 90 ॥


ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷುಮಿಯೊಡಗೂಡಿ
ಅನಂತವೈಭವದಿ ಕುಳಿತ ಕೃಷ್ಣಗೆ ನಾಲ್ಕು
ದಿನದುತ್ಸವವ ನಡೆಸಿದರು ॥ 91 ॥


ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾ-
ರತ್ತಿ ಮೊದಲಾದ ಸುರಸ್ತ್ರೀಯರು
ಮುತ್ತಿನಾಕ್ಷತೆಯನು ಶೋಭನವೆನುತ ತ-
ಮ್ಮರ್ತಿಯಳಿಯಗೆ ತಳಿದರು ॥ 92 ॥


ರತ್ನದಾರತಿಗೆ ಸುತ್ತಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೈದೆಯರೆಲ್ಲ ಧವಳದ ಪದನ ಪಾ-
ಡುತ್ತಲೆತ್ತಿದರೆ ಸಿರಿವರಗೆ ॥ 93 ॥


ಬೊಮ್ಮ ತನ್ನರಸಿ ಕೂಡೆ ಬಂದೆರಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ॥ 94 ॥


ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಸುರರು ಮುದದಿಂದ
ಮುತ್ತಿನ ಕಂಠೀಸರ ಮುಖ್ಯಪ್ರಾಣನಿತ್ತ
ಮಸ್ತಕಮಣಿಯ ಶಿವನಿತ್ತ ॥ 95 ॥


ತನ್ನರಸಿ ಕೂಡೆ ಸವಿನುಡಿ ನುಡಿವಾಗ ವ-
ದನ್ನದಲ್ಲಿದ್ದಗ್ನಿ ಕೆಡದಂತೆ
ವಹ್ನಿಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿಯಿತ್ತ ಸುರರಿಗೆ ॥ 96 ॥


ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹರುಷದಿ ಉಣಿಸಬೇಕೆಂದು ಸಿಂಧು
ಸರ್ಬರಿಗೆಡೆಯ ಮಾಡಿಸಿದ ॥ 97 ॥


ಮಾವನ ಮನೆಯಲ್ಲಿ ದೇವರಿಗೌತಣವ ದಾ-
ನವರು ಕೆಡಿಸದೆ ಬಿಡರೆಂದು ದಾ-
ನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವ ಸ್ತ್ರೀವೇಷವ ಧರಿಸಿದ ॥ 98 ॥


ತನ್ನ ಸೌಂದರ್ಯದಿಂದನ್ನಂತಮಡಿಯಾದ ಲಾ-
ವಣ್ಯದಿ ಮೆರೆವ ನಿಜಪತಿಯ
ಹೆಣ್ಣುರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು ॥ 99 ॥


ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವುಕರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ॥ 100 ॥


ನಾಗನ ಮೇಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದ ॥ 101 ॥


ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ॥ 102 ॥


ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣ ಮದು-
ಮಕ್ಕಳಾಯುಷ್ಯವ ಬೆಳೆಸೆಂದ ॥ 103 ॥


ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತು ಸಾವಿರ ಕೊಟ್ಟ ವರುಣದೇವ ಹರಿ-
ಭಕ್ತಿಯ ಮನದಿ ಬೆಳೆಸೆಂದ ॥ 104 ॥


ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದ ಅಮರರಿಗೆ ಸಲಿಸಿದ
ಉಳಿದ ಅಮರರಿಗೆ ಸಲಿಸಿದ ಸಮುದ್ರ
ಕಳುಹಿದನವರವರ ಮನೆಗಳಿಗೆ ॥ 105 ॥


ಉನ್ನಂತ ನವರತ್ನಮಯವಾದ ಅರಮನೆಯ
ಚೆನ್ನೇಮಗಳಿಂದ ವಿರಚಿಸಿ
ತನ್ನ ಅಳಿಯಗೆ ಸ್ಥಿರವಾಗಿ ಮಾಡಿಕೊಟ್ಟು
ಇನ್ನೊಂದು ಕಡೆಯಡಿ ಇಡದಂತೆ ॥ 106 ॥


ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ॥ 107 ॥


ಈ ಪದನ ಮಾಡಿದ ವಾದಿರಾಜೇಂದ್ರಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣ ಸ-
ಮೀಪದಲ್ಲಿಟ್ಟು ಸಲಹಲಿ ॥ 108 ॥


ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ-
ಕಾಂತನ ಕಂದನೆನಿಸುವ
ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿ
ಪಂಥದಿ ಪೇಳಿದ ಪದವಿದು ॥ 109 ॥


ಶ್ರೀಯರಸ ಹಯವದನಪ್ರಿಯ ವಾದಿರಾಜ-
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿ-
ರಾಯಾಸದಿಂದ ಸುಖಿಪರು ॥ 110 ॥


ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೋದಿಸುವ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಅಸು-
ರಮ್ಮೋಹನವೆ ನರನಟನೆ ॥ 111 ॥


ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ವಾಲೆಭಾಗ್ಯ ದಿನದಿನಕೆ ಹೆಚ್ಚುವುದು
ಮದನನಯ್ಯನ ಕೃಪೆಯಿಂದ ॥ 112 ॥


ಶೋಭಾನವೆನ್ನಿರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ 113 ॥


ಶೋಭಾನವೆನ್ನಿರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ ಪ ॥


ಹಡಗಿನೊಳಗಿಂದ ಬಂದ ಕಡು ಮುದ್ದು ಶ್ರೀಕೃಷ್ಣಗೆ
ಕಡೆಗೋಲು ನೇಣ ಪಿಡಿದನೆ ॥
ಕಡಗೋಲು ನೇಣ ಪಿಡಿದನೆ ದೇವಕಿಯ
ತನಯಗಾರುತಿಯ ಬೆಳಗಿರೆ ॥ ಶೋಭಾನೆ ॥


ಆಚಾರ್ಯರ ಕೈಯಿಂದ ಅಧಿಕಪೂಜೆಯಗೊಂಬ
ಕಾಂತೆ ಲಕ್ಷ್ಮಿಯ ಅರಸನೆ ॥
ಕಾಂತೆ ಲಕ್ಷ್ಮಿಯ ಅರಸನೆ ಶ್ರೀಕೃಷ್ಣಗೆ
ಕಾಂಚನದಾರತಿಯ ಬೆಳಗಿರೆ ॥ ಶೋಭಾನೆ ॥


ಮಧ್ವಸರೋವರದಿ ಶುದ್ಧ ಪೂಜೆಯ ಕೊಂಬ
ಮುದ್ದು ರುಕ್ಮಿಣಿಯರಸನೆ ॥
ಮುದ್ದು ರುಕ್ಮಿಣಿಯ ಅರಸನೆ ಶ್ರೀಕೃಷ್ಣಗೆ
ಮುತ್ತಿನಾರತಿಯ ಬೆಳಗಿರೆ ॥ ಶೋಭಾನೆ ॥


ಪಾಂಡವರ ಪ್ರಿಯನೆ ಚಾಣೂರಮರ್ದನನೆ
ಸತ್ಯಭಾಮೆಯ ಅರಸನೆ ॥
ಸತ್ಯಭಾಮೆಯ ಅರಸನೆ ಶ್ರೀಕೃಷ್ಣಗೆ
ನವರತ್ನದಾರತಿಯ ಬೆಳಗಿರೆ ॥ ಶೋಭಾನೆ ॥


ಸೋದರ ಮಾವನ ಮಧುರೆಲಿ ಮಡುಹಿದ
ತಾಯಿಯ ಸೆರೆಯ ಬಿಡಿಸಿದ ॥
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರತಿಯ ಬೆಳಗಿರೆ ॥ ಶೋಭಾನೆ ॥


ಮುತ್ತೈದೆಯರೆಲ್ಲರೂ ಮುತ್ತಿನಾರುತಿ ಎತ್ತಿ
ಹತ್ತಾವತಾರದ ಹಯವದನಗ
ಹತ್ತಾವತಾರದ ಹಯವದನ ದೇವಗ
ಹೊಸ ಮುತ್ತಿನಾರುತಿಯ ಬೆಳಗಿರೆ ॥ ಶೋಭಾನೆ ॥